Bengali, English, Hindi, Malayalam, Telugu
26 ಕೋಟಿ ಮಕ್ಕಳ ಶಿಕ್ಷಣದ ಪುನರಾರಂಭ ಮತ್ತು ನವೀಕರಣ
ಭಾರತದಲ್ಲಿ ತಲೆ ಎತ್ತಿ ದೊಡ್ಡದಾಗುತ್ತಿರುವ ಶೈಕ್ಷಣಿಕ ತುರ್ತುಪರಿಸ್ಥಿತಿಯ ಕುರಿತು ಕಾಳಜಿ ಇರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು 16 ಜುಲೈ 2021ರಂದು ವರ್ಚುಯಲ್ ಸಭೆಯಲ್ಲಿ ಪಾಲ್ಗೊಂಡರು. ಈ ಸಭೆಯಲ್ಲಿ ನಮ್ಮ ದೇಶದ ಮಕ್ಕಳು ಅದರಲ್ಲೂ ಅತ್ಯಂತ ಬಡ ಹಾಗೂ ಅವಕಾಶ ವಂಚಿತ ಗುಂಪುಗಳ ಗಂಡಾಂತರವನ್ನು ಬಗೆಹರಿಸುವ ಕುರಿತಾದ ಚರ್ಚೆ ನಡೆಸಲಾಯಿತು. ಒಕ್ಕೂಟ ಎರಡು ರೀತಿಗಳಲ್ಲಿ ಕೆಲಸ ಮಾಡಬಹುದೆನ್ನುವ ನಿರ್ಧಾರ ತೆಗೆದುಕೊಳ್ಳಲಾಯಿತು, (೧) ಶಾಲೆ ಮತ್ತು ಸಮುದಾಯಗಳಿಗೆ ತಡವಿಲ್ಲದೆ ಶೈಕ್ಷಣಿಕ ಬೆಂಬಲ ನೀಡುವುದು (೨) ಸಮತೆ ಮತ್ತು ಅರ್ಥಪೂರ್ಣ ಶೈಕ್ಷಣಿಕ ಅವಕಾಶಗಳನ್ನು ಎಲ್ಲ ಮಕ್ಕಳಿಗೆ ನೀಡಲು, ಹಾಗೂ ಅದಕ್ಕೆ ಸಂಬಂಧಿಸಿದ ಆರೋಗ್ಯ ಮತ್ತು ಜೀವನೋಪಾಯ ವಿಷಯಗಳ ಬಗ್ಗೆ ಕ್ರಿಯಾಶೀಲರಾಗಲು ಸಾಮಾಜಿಕ ಸಂಚಲನೆ ಆರಂಭಿಸಿ ಅಧಿಕಾರಿಗಳನ್ನು ಪ್ರಭಾವಿಸುವುದು.
ಸಮತೆಯೇ ಈ ಒಕ್ಕೂಟದ ಮೂಲ ಉದ್ದೇಶ ಮತ್ತು ಸೈದ್ಧಾಂತಿಕ ಸಾರ – ಕಲಿಕೆ ಮತ್ತು ಅಭಿವೃದ್ಧಿಯ ಅವಕಾಶಗಳು ಎಲ್ಲರಿಗೂ ದೊರೆಯುವುದನ್ನು ಖಾತರಿ ಪಡಿಸಿಕೊಳ್ಳುವುದು ಹಾಗೂ ಶಿಕ್ಷಣ ಹಕ್ಕು ಕಾಯಿದೆಯ ಆಶಯಗಳನ್ನು ಪೂರೈಸುವುದು. ಹಲವು ಸರ್ಕಾರೇತರ ಸಂಸ್ಥೆಗಳು, ಕೆಲವು ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾ ಅಧಿಕಾರಗಳು ಈ ತುರ್ತುಪರಿಸ್ಥಿತಿಯನ್ನು ಎದುರಿಸಲು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದಾರೆ. ಇವನ್ನು ನಾವು ಬೆಳೆಸಬೇಕು. ಆಸಕ್ತರೆಲ್ಲರೂ ನಮ್ಮನ್ನು ಸಂಪರ್ಕಿಸಿ, ಅನುಭವಗಳನ್ನು ಹಂಚಿಕೊಳ್ಳಬೇಕು ಮತ್ತು ಈ ಒಕ್ಕೂಟದ ಪ್ರಯತ್ನಗಳಿಗೆ ಕೈ ಜೋಡಿಸಬೇಕೆಂದು ಕರೆ ನೀಡುತ್ತಿದ್ದೇವೆ. ಸಭೆಯ ಕುರಿತಾದ ಮಾಹಿತಿಯನ್ನು ಇಲ್ಲಿ ಪಡೆಯಬಹುದು.
ಕೋವಿಡ್-19 ಸಾಂಕ್ರಾಮಿಕ ರೋಗ ಲಕ್ಷಾಂತರ ಜನರ ಜೀವನಗಳನ್ನು ಅಳಿಸಿಬಿಟ್ಟಿದೆ. ಲಾಕ್‌ಡೌನ್‌ಗಳು ಲಕ್ಷಾಂತರ ಜನರ ಜೀವನವನ್ನು ನಾಶಪಡಿಸಿವೆ. ಮೃತದೇಹಗಳು ಉರಿಯುತ್ತಿರುವ ಚಿತಾಗ್ನಿ ಮತ್ತು ನೂರಾರು ಮೈಲಿ ದೂರವಿರುವ ಊರುಗಳಿಗೆ ನಡಿಗೆಯಲ್ಲೇ ಹೊರಟ ವಲಸಿಗರ ದೃಶ್ಯಗಳಿಂದ ದೇಶದಲ್ಲಿನ ಆರೋಗ್ಯ ಮತ್ತು ಜೀವನೋಪಾಯಗಳ ತುರ್ತುಪರಿಸ್ಥಿತಿ ಎಲ್ಲರ ಕಣ್ಣಿಗೆ ರಾಚುವಂತಿದೆ.
ಆದರೆ ಕಣ್ಣಿಗೆ ಕಾಣದಿರುವ ಮತ್ತು ಸದ್ದೇ ಮಾಡದಿರುವ ಇನ್ನೊಂದು ತುರ್ತುಪರಿಸ್ಥಿತಿಯು ಭವಿಷ್ಯದಲ್ಲಿ ಬಡವರ ಜೀವನೋಪಾಯಗಳನ್ನು ಅವರ ಆತ್ಮ ಸಮ್ಮಾನ ಮತ್ತು ಸಮಾನತೆಯ ಜೀವನವನ್ನು ನಿರ್ನಾಮ ಮಾಡುವ ಬೆದರಿಕೆಯನ್ನು ಹಾಕುತ್ತಿದೆ. ಭಾರತದ ಹಲವು ಭಾಗಗಳಲ್ಲಿ ಹೆಚ್ಚು ಕಡಿಮೆ ಇಡೀ ವರ್ಷ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ತನ್ನ ಶಾಲೆಯ ಬಾಗಿಲುಗಳನ್ನು ಮುಚ್ಚಿತು. ಈ ವರ್ಷವೂ ಇದೇ ಮುಂದುವರೆಯುವ ಸಾಧ್ಯತೆ ಇದೆ. ಸಾವಿರಾರು ಮಕ್ಕಳು ತಾಯಿ ತಂದೆಯರಲ್ಲಿ ಒಬ್ಬರನ್ನು ಅಥವಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಕ್ಕಳ ಪೋಷಕರು ಉದ್ಯೋಗ ಕಳೆದುಕೊಂಡು ಆದಾಯವಿಲ್ಲದ ಸ್ಥಿತಿಯಲ್ಲಿದ್ದಾರೆ ಹಾಗೂ ಆರೋಗ್ಯದ ಸಲುವಾಗಿ ಹಣ ಖರ್ಚು ಮಾಡಿ ವಿಷಮ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಮಕ್ಕಳು ತಮ್ಮ ಕುಟುಂಬಗಳನ್ನು ಬೆಂಬಲಿಸಬೇಕಾಗತ್ತದೆ, ಹಾಗಾಗಿ ಇವರು ಕೂಲಿ ಮಾಡುವುದು ಅಥವಾ ಶಾಲೆಗೆ ಬರುವುದರ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಶಾಲೆಗಳು ಮುಚ್ಚಿರುವುದರಿಂದ ಅಪೌಷ್ಟಿಕತೆ, ಮಕ್ಕಳ ಮೇಲಿನ ದೌರ್ಜನ್ಯ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳು ಶಾಲೆಯಿಂದ ಹೊರಗುಳಿಯುವುದು ಮತ್ತು ಬಾಲ್ಯ ವಿವಾಹದಲ್ಲಿ ಹೆಚ್ಚಳಿಕೆ ಕಂಡು ಬಂದಿದೆ. ಇದನ್ನೇ ನಾವು ಶೈಕ್ಷಣಿಕ ತುರ್ತು ಪರಿಸ್ಥಿತಿ ಎಂದು ಕರೆಯುತ್ತಿದ್ದೇವೆ. ಇದರ ಬಗ್ಗೆ ಹಚ್ಚು ತಿಳಿಯಲು ಇಲ್ಲಿ ಓದಿ.
ಶೈಕ್ಷಣಿಕ ತುರ್ತು ಪರಿಸ್ಥಿತಿಯು ಸರ್ಕಾರೀ ಅನುದಾನಿತ ಹಾಗೂ ʼಬಡʼ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ 26 ಕೋಟಿಗಿಂತಲೂ ಹೆಚ್ಚು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತಿದೆ. ಹೆಚ್ಚಿನ ಸಂಪನ್ಮೂಲಗಳನ್ನು ಹೊಂದಿದ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಆನ್‌ಲೈನ್ ಪದ್ದತಿಯಲ್ಲಿ ಕಲಿಕೆಯನ್ನು ಮುಂದುವರೆಸುತ್ತಿದ್ದಾರೆ. ಜೊತೆಗೆ ಇವರಿಗೆ ಪೋಷಕರ ಬೆಂಬಲವೂ ಇರುತ್ತದೆ. ಹಾಗಾಗಿ ಶೈಕ್ಷಣಿಕ ಅಸಮಾನತೆ ಹೆಚ್ಚುತ್ತಿದೆ.
ಶಿಕ್ಷಣದ ಪುನರಾರಂಭ: “ಶೈಕ್ಷಣಿಕ ತುರ್ತು ಪರಿಸ್ಥಿತಿ ಕೊಠಡಿ”ಗಳ ಸ್ಥಾಪನೆ
ಮಕ್ಕಳಿಗೆ, ಅದರಲ್ಲೂ ಅನುಕೂಲ ವಂಚಿತ ಗುಂಪಿನ ಮಕ್ಕಳಿಗೆ ಸಂರಚನೆಗೊಂಡ ಕಲಿಕಾ ಅವಕಾಶಗಳು ಮತ್ತು ಬೆಂಬಲದ ಆವಶ್ಯಕತೆ ಇರುತ್ತದೆ. ಈ ಶೈಕ್ಷಣಿಕ ತುರ್ತು ಪರಿಸ್ಥಿತಿಯನ್ನು ಎದುರಿಸುವುದೆಂದರೆ ಮಕ್ಕಳ ಮತ್ತು ಶಿಕ್ಷಕರ ಆರೋಗ್ಯ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳುವುದು, ಮಕ್ಕಳ ಪೌಷ್ಟಿಕಾಂಶಗಳ ಅಗತ್ಯಗಳನ್ನು ಪೂರೈಸುವುದು, ಅವರು ತಮ್ಮ ಶಿಕ್ಷಣವನ್ನು ಮುಂದುವರೆಸಲು ಶಿಕ್ಷಕರೊಂದಿಗೆ ಅರ್ಥಪೂರ್ಣ ಸಂವಹನ ಮಾರ್ಗಗಳನ್ನು ಏರ್ಪಡಿಸುವುದರ ಮೂಲಕ ಅವರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಭಾವನಾತ್ಮಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವುದು.
ದೂರದರ್ಶನ ಅಥವಾ ರೇಡಿಯೋ ಮೂಲಕ ಪ್ರಸಾರವಾಗುವ “ಪರೋಕ್ಷ ಕಲಿಕಾ” ಕಾರ್ಯಕ್ರಮಗಳು ಮಕ್ಕಳನ್ನು ತೊಡಗಿಸುವಲ್ಲಿ ಅಸಮರ್ಥವಾಗಿವೆ. ವಿಷಯವಸ್ತು ಮತ್ತು ಶಿಕ್ಷಕ ತರಬೇತಿಯನ್ನು ಸಮರ್ಪಕವಾಗಿ ಸಿದ್ಧಗೊಳಿಸದೆ “ಡಿಜಿಟಲ್ ಶಿಕ್ಷಣ” ಕ್ಕೆ ಹಲವು ರಾಜ್ಯಗಳು ಹಾರಿವೆ. ಬಹುತೇಕ ಮಕ್ಕಳಿಗೆ ಇದರಲ್ಲಿ ಪಾಲ್ಗೊಳ್ಳಲು ಬೇಕಿರುವ ಸಾಧನಗಳಿಲ್ಲ ಮತ್ತು ಇಂಟರ್‌ನೆಟ್ ಸಂಪರ್ಕವಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ.
ತಮ್ಮ ಶಿಕ್ಷಕರು ಮತ್ತು ಸ್ನೇಹಿತರ ಒಡನಾಟವಿಲ್ಲದಿರುವುದು ಇವರ ಮೇಲೆ ಪ್ರಭಾವ ಬೀರಿದೆ. ಸರ್ಕಾರದ ಉದ್ದೇಶವೇನು ಎನ್ನುವುದರ ಕುರಿತು ಸ್ಪಷ್ಟತೆ ಇಲ್ಲದಿರುವುದು ಶಿಕ್ಷಕರು, ಪೋಷಕರು ಮತ್ತು ಮಕ್ಕಳಲ್ಲಿ ಗೊಂದಲವನ್ನುಂಟುಮಾಡಿದೆ.
ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಖಚಿತಪಡಿಸಿಕೊಂಡು ಔಪಚಾರಿಕ ಶಾಲೆಗಳನ್ನು ತೆರೆಯುವುದಕ್ಕೆ ಪರ್ಯಾಯವಿಲ್ಲ.
ಅನೇಕ ಜಿಲ್ಲೆಗಳು ಆರೋಗ್ಯದ ತುರ್ತುಪರಿಸ್ಥಿತಿಯನ್ನು ನಿಭಾಯಿಸಲು “ಕೋವಿಡ್- 19ಯುದ್ಧ ಕೊಠಡಿ” ಗಳನ್ನು ತೆರೆದಿದ್ದಾರೆ. ಅದೇ ರೀತಿ, ಈಗ ಪ್ರತಿ ಜಿಲ್ಲೆಯಲ್ಲೂ “ಶೈಕ್ಷಣಿಕ ತುರ್ತುಪರಿಸ್ಥಿತಿ ಕೊಠಡಿ” ಗಳ ಅಗತ್ಯವಿದೆ. ಪ್ರತಿನಿತ್ಯ ಮಕ್ಕಳು ಶಿಕ್ಷಣದಲ್ಲಿ ಭಾಗವಹಿಸುತ್ತಿರುವುದು, ಶಾಲೆಗಳಲ್ಲಿ ಅವರ ಸುರಕ್ಷತೆ, ಸಮಸ್ಯೆಗಳ ಪರಿಹಾರ ಹಾಗೂ ಪೋಷಕರ ಕುಂದುಕೊರತೆಗಳ ನಿವಾರಣೆ ಈ ಯುದ್ಧ ಕೊಠಡಿಗಳ ಮುಖ್ಯ ಉದ್ದೇಶವಾಗಿರಬೇಕು.
ಶಿಕ್ಷಣದ ನವೀಕರಣ – ಬೆಳವಣಿಗೆ ಮತ್ತು ಅತ್ಮ ಸಮ್ಮಾನಕ್ಕಾಗಿ ಶಿಕ್ಷಣ
ಕೊರೊನಾ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಬಿಕ್ಕಟ್ಟು ಶಿಕ್ಷಣವನ್ನು ನವೀಕರಿಸುವ ಕುರಿತು ಗಮನಹರಿಸಬೇಕೆನ್ನುವ ಪರಿಸ್ಥಿತಿಯನ್ನು ತಂದಿದೆ. ಶಿಕ್ಷಣವು ಮಕ್ಕಳ ಸಾಮಾಜಿಕ-ಭಾವನಾತ್ಮಕ ಅಗತ್ಯಗಳನ್ನು, ಅದರಲ್ಲೂ ವಿಶೇಷವಾಗಿ ದೀರ್ಘಕಾಲ ಶಾಲಾ ಪ್ರಕ್ರಿಯೆಯಿಂದ ಹೊರಗುಳಿದಿರುವ ಮಕ್ಕಳ ಅಗತ್ಯಗಳ ಪೂರೈಕೆಯನ್ನು ಖಾತರಿ ಪಡಿಸಿಕೊಳ್ಳಬೇಕು. ಸಣ್ಣ ಸಣ್ಣ “ಸೇತು ಬಂಧ” ಕಾರ್ಯಕ್ರಮಗಳ ನಂತರ ತರಗತಿ ಮಟ್ಟದ ಶಿಕ್ಷಣವನ್ನು ತರಾತುರಿಯಲ್ಲಿ ಪುನರಾರಂಭಿಸಬಾರದು. ಮುಂದಿನ ಕೆಲವು ವರ್ಷಗಳು ʼಪರಿಹಾರ ಬೋಧನೆ” ಅಥವಾ ಪಠ್ಯಪುಸ್ತಕಗಳ ಕಂಠಪಾಠ ಆಧಾರಿತ ಶಿಕ್ಷಣದಿಂದ ದೂರ ಸರಿದು ವಿದ್ಯಾರ್ಥಿಗಳ ಸನ್ನಿವೇಶಗಳಿಗೆ ಸ್ಪಂದಿಸುವ ಮತ್ತು ಅವರನ್ನು ಅರ್ಥಮಾಡಿಕೊಂಡು ಶಿಕ್ಷಣ ನೀಡುವ ರೀತಿಯನ್ನು ಅನುಸರಿಸಬೇಕು. ಮಕ್ಕಳು ವಿವಿಧ ವೇಗಗಳಲ್ಲಿ ಕಲಿಯುತ್ತಾರೆ ಮತ್ತು ಅವರ ಅಗತ್ಯಗಳು ಭಿನ್ನವಾಗಿರುತ್ತವೆ. ಏಕರೂಪದ ವಿಧಾನ ಅನುಸರಿಸಿದರೆ ಅದರಿಂದ ಮಕ್ಕಳಿಗೆ ಹಾನಿಯಾಗುತ್ತದೆ. ಸ್ಥಳೀಯವಾಗಿ ನಮ್ಯವಾಗಿರುವುದು ಅತ್ಯಂತ ಆವಶ್ಯಕ. ಎಲ್ಲ ಮಕ್ಕಳು ಸಮತೆಯುಳ್ಳ ಕಲಿಕಾ ಅವಕಾಶಗಳನ್ನು ಪಡೆಯುತ್ತಿರುವುದನ್ನು ಖಚಿತ ಪಡಿಸಿಕೊಳ್ಳಲು ಸಿದ್ಧಾಂತಗಳು ಮತ್ತು ಪ್ರಕ್ರಿಯೆಗಳನ್ನು ಅಭಿವೃದ್ಧಿಗೊಳಿಸಬೇಕು ಅನುಷ್ಠಾನಗೊಳಿಸಬೇಕು ಹಾಗೂ ಅದರ ಪರಿಶೀಲನೆಯಾಗಬೇಕು. ಅಗತ್ಯವಿರುವ ಮೂಲಸೌಕರ್ಯ, ಕಲಿಕಾ ಸಂಪನ್ಮೂಲಗಳು ಮತ್ತು ಶಿಕ್ಷಕರ ಸಿದ್ಧತೆಗಾಗಿ ಶಿಕ್ಷಣದ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಬೇಕು. ಈ ಸಾಂಕ್ರಾಮಿಕ ರೋಗವು ನಮ್ಮ ಮೇಲೆ ಮಕ್ಕಳನ್ನು ಬೆಳೆಸಲು ಮತ್ತು ಅವರನ್ನು ಅಭಿವೃದ್ಧಿಪಡಿಸುವ ದೊಡ್ಡ ಜವಾಬ್ದಾರಿಯನ್ನು ತಂದಿದೆ.
ಒಕ್ಕೂಟವು ಕೆಲಸ ಮಾಡುವ ಎರಡು ದಾರಿಗಳು
೧. ಶಿಕ್ಷಣ ಹಕ್ಕು ಕಾಯಿದೆಯನ್ನು ಸಾಕಾರಗೊಳಿಸಲು ಸಮಾಜವನ್ನು ಹುರಿದುಂಬಿಸಿಸಲು ಸಿದ್ಧಗೊಳಿಸುವುದು: ಈ ಕಾರ್ಯಕಾರಿ ಗುಂಪು ವಿವಿಧ ರಾಜ್ಯಗಳ ವಿವಿಧ ಸಂಸ್ಥೆಗಳೊಡನೆ ಸಂಪರ್ಕವನ್ನು ಏರ್ಪಡಿಸಿಕೊಳ್ಳುತ್ತದೆ – ಇದರಲ್ಲಿ ಪೋಷಕರು, ನಾಗರಿಕ ಸಮುದಾಯ ಸಂಸ್ಥೆಗಳು, ಶಿಕ್ಷಕರ ಗುಂಪುಗಳು ಇತ್ಯಾದಿ ಹೀಗೆ. ಇದು ಶಿಕ್ಷಣ ತುರ್ತುಸ್ಥಿತಿಯ ತಿಳುವಳಿಕೆಯನ್ನು ಹೆಚ್ಚಿಸುತ್ತದೆ, ನೀತಿಗಳನ್ನು ಅನುಸರಿಸುತ್ತದೆ ಮತ್ತು ಅವುಗಳ ಅನುಷ್ಠಾನವನ್ನು ಹೆಚ್ಚಿಸುತ್ತದೆ ಮತ್ತು ಶಿಕ್ಷಣ ಹಕ್ಕು ಕಾಯಿದೆಯಿಂದ ದೊರಕಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ಜನರನ್ನು ಸಬಲರನ್ನಾಗಿಸುವುದು.
೨. ಶಾಲೆಗಳು ಮತ್ತು ಸಮುದಾಯಗಳಿಗೆ ಶೈಕ್ಷಣಿಕ ಬೆಂಬಲ: ಈ ಕಾರ್ಯಕಾರಿ ಗುಂಪು ಕೋವಿಡ್-19ಸಾಂಕ್ರಾಮಿಕ ಸಮಯದಲ್ಲಿ ಬಳಸಿದ ಮಾದರಿಗಳನ್ನು ಗುರುತಿಸುತ್ತದೆ, ಸಂಪನ್ಮೂಲಗಳನ್ನು ಸಂಗ್ರಹಿಸುತ್ತದೆ ಮತ್ತು ಇವುಗಳನ್ನು ಮಕ್ಕಳೊಂದಿಗೆ ಕೆಲಸ ಮಾಡುವ ವ್ಯಕ್ತಿಗಳು ಮತ್ತು ಗುಂಪುಗಳೊಂದಿಗೆ ಹಂಚಿಕೊಳ್ಳುತ್ತದೆ. ಜಾಲತಾಣದ ಮೂಲಕ ಮತ್ತು ಭಾಗವಹಿಸುತ್ತಿರುವ ಸಂಸ್ಥೆಗಳ ಮೂಲಕ ಈ ಸಂಪನ್ಮೂಲಗಳು ಪೋಷಕರು, ಶಿಕ್ಷಕರು ಮತ್ತು ಸಂಸ್ಥೆಗಳಿಗೆ ವಿವಿಧ ಭಾಷೆಗಳಲ್ಲಿ ದೊರಕುತ್ತವೆ.
ರಾಷ್ಟ್ರೀಯ ಶಿಕ್ಷಣ ತುರ್ತು ಪರಿಸ್ಥಿತಿ ಒಕ್ಕೂಟ | info[dot]educationemergency[dot]net ನಲ್ಲಿ ನಮ್ಮನ್ನು ಸಂಪರ್ಕಿಸಿ.
4 thoughts on “ರಾಷ್ಟ್ರೀಯ ಶೈಕ್ಷಣಿಕ ತುರ್ತುಪರಿಸ್ಥಿತಿ ಒಕ್ಕೂಟ”