ಒಂದನೇ ತರಗತಿಯಿಂದಲೇ ಪೂರ್ಣ ಪ್ರಮಾಣದಲ್ಲಿ ಬಿಸಿ ಹಾಲು ಹಾಗೂ ಮಧ್ಯಾಹ್ನದ ಬಿಸಿಯೂಟದೊಂದಿಗೆ ಶಾಲೆಗಳನ್ನು ಕೂಡಲೇ ಪ್ರಾರಂಭಿಸಬೇಕೆಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾಪೋಷಕ ಹಾಗೂ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರಕಾರ ಶಾಲೆಗಳನ್ನು ತೆರೆಯುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ 9, 10 ಹಾಗೂ ಪಿಯುಸಿ ತರಗತಿಗಳನ್ನು ಆ.23ರಿಂದ ಪ್ರಾರಂಭಿಸಲು ಮುಂದಾಗಿರುವುದನ್ನು ಎಸ್ಡಿಎಂಸಿ ವೇದಿಕೆ ಸ್ವಾಗತಿಸುತ್ತದೆ. ಅದೇ ಹೊತ್ತಿನಲ್ಲಿ ತಜ್ಞ ಸಮಿತಿಯ ವರದಿಯಂತೆ ಒಂದನೇ ತರಗತಿಯಿಂದಲೇ ಶಾಲೆಗಳನ್ನು ಕೂಡಲೇ ಪ್ರಾರಂಭಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಕಳೆದ ಒಂದೂವರೆ ವರ್ಷದಲ್ಲಿ ಕಲಿಕೆಯ ಜತೆಜತೆಗೆ ಪೌಷ್ಟಿಕಾಂಶ ಹಾಗೂ ಭೌತಿಕ-ಭಾವನಾತ್ಮಕ ಬೆಳವಣಿಗೆಯ ಗರಿಷ್ಟ ನಷ್ಟವಾಗಿರುವುದು ಅಂಗನವಾಡಿಯಿಂದ 8ನೇ ತರಗತಿಯಲ್ಲಿ ಕಲಿಯುತ್ತಿರುವ ಸಣ್ಣ ಮಕ್ಕಳಾಗಿದ್ದಾರೆ. ಇದರೊಂದಿಗೆ ಈ ಹಂತದಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಅತಿಕಡಿಮೆಯಿದೆ. ಹೀಗಾಗಿ ಈ ಶಾಲೆಗಳನ್ನು ಮೊದಲು ಪ್ರಾರಂಭಿಸುವುದು ವೈಜ್ಞಾನಿಕವಾಗಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ತೀರ್ಮಾನವಾಗುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಒತ್ತಾಯಗಳು
-ಈ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಶಾಲೆಗಳಲ್ಲಿ ರಾಜ್ಯವ್ಯಾಪಿ ಮಕ್ಕಳ ದಾಖಲಾತಿಗಳು ಹೆಚ್ಚುತ್ತಿದೆ. ಈ ಅವಕಾಶವನ್ನು ಬಳಸಿಕೊಂಡು ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸರಕಾರ ವಿಶೇಷ ಯೋಜನೆ ರೂಪಿಸಬೇಕು.
-ಹೆಚ್ಚುತ್ತಿರುವ ಮಕ್ಕಳ ದಾಖಲಾತಿ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕ, ಭೌತಿಕ ಮೂಲ ಸೌಕರ್ಯ, ಅಗತ್ಯ ಪೀಠೋಪಕರಣ, ಪಠ್ಯಪುಸ್ತಕ, ಸಮವಸ್ತ್ರ ಇತ್ಯಾದಿಗಳನ್ನು ಕೂಡಲೇ ಒದಗಿಸಬೇಕು.
-ಸರಕಾರಿ ಶಾಲೆಗಳ ಸಬಲೀಕರಣ ವರದಿ 2017ನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಿ ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಎಲ್ಲ ಅಗತ್ಯ ಕ್ರಮಕೈಗೊಳ್ಳಬೇಕು.