ತರಗತಿಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿರ್ಬಂಧವನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪು ಶಿಕ್ಷಣದ ಹಕ್ಕಿನ ಉಲ್ಲಂಘನೆಯಾಗಿದೆ

೧೬ ಮಾರ್ಚ್ ೨೦೨೨

ಸಮವಸ್ತ್ರವನ್ನು ಸೂಚಿಸಿರುವ ಶಿಕ್ಷಣ ಸಂಸ್ಥೆಗಳಲ್ಲಿ, ಹಿಜಾಬ್ ಧರಿಸಿರುವ ವಿದ್ಯಾರ್ಥಿಗಳು ತರಗತಿಗಳು ಮತ್ತು ಪರೀಕ್ಷೆಗಳಿಗೆ ಹಾಜರಾಗುವುದನ್ನು ವ್ಯವಸ್ಥಿತವಾಗಿ ತಡೆಗಟ್ಟುವುದನ್ನು ಎತ್ತಿಹಿಡಿಯುವ ಕರ್ನಾಟಕ ಹೈಕೋರ್ಟಿನ ಮಾರ್ಚ್ 15 ರ ತೀರ್ಪು ಅತ್ಯಂತ ನಿರಾಶದಾಯಕ ಹಾಗು ಸಂವಿಧಾನ ಬಾಹಿರ . ಭಾರತೀಯ ಸಂವಿಧಾನವು ಎಲ್ಲ ನಾಗರಿಕರಿಗೆ ತಮ್ಮ ಆಯ್ಕೆಯ ಧರ್ಮವನ್ನು ಪಾಲಿಸುವ ಸ್ವಾತಂತ್ರ್ಯವನ್ನು ನೀಡುತ್ತದೆ, ಆದರೆ, “ಸಮಂಜಸವಾದ ನಿರ್ಬಂಧಗಳೊಂದಿಗೆ” ಎಂದು ನ್ಯಾಯಾಲಯವು ವಾದಿಸುತ್ತದೆ. ಆದರೆ, ಐತಿಹಾಸಿಕವಾಗಿ ಶಿಕ್ಷಣ ಪಡೆಯುವುದರಿಂದ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸುವ ಈ ನಿರ್ಬಂಧಗಳು ಯಾವ ರೀತಿಯಲ್ಲಿ “ಸಮಂಜಸ” ಎಂದು ಪರಿಗಣಿಸಬಹುದು ಎಂಬುದು ನಮಗೆ ಆಶ್ಚರ್ಯಕರ ಸಂಗತಿಯಾಗಿದೆ .

ಈ ಹೈಕೋರ್ಟಿನ ತೀರ್ಪು ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯ (ಆರ್ಟಿಕಲ್ 19, 25) ಮತ್ತು ಸಮಾನತೆ (ಆರ್ಟಿಕಲ್ 14) ಸೇರಿದಂತೆ, ಮಹಿಳೆಯರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ವಾದಗಳು ಮಾಡಲಾಗಿದ್ದು, ಈ ಹೇಳಿಕೆಯಲ್ಲಿ ನಾವು ಅವರ ಶಿಕ್ಷಣದ ಹಕ್ಕಿನ(ಆರ್ಟಿಕಲ್ 21A ಹಾಗು 41 ) ಉಲ್ಲಂಘನೆಯ ಬಗ್ಗೆ ಗಮನ ಹರಿಸಲು ಬಯಸುತ್ತೇವೆ.

೧. ಆರ್ಟಿಕಲ್ 21 ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು. ಭಾರತದ ಸುಪ್ರೀಂ ಕೋರ್ಟ್ ಈ ವಿಧಿಯನ್ನು ‘ಮೂಲಭೂತ ಹಕ್ಕುಗಳ ಹೃದಯ’ ಎಂದು ಘೋಷಿಸಿದೆ. 86 ನೇ ಸಾಂವಿಧಾನಿಕ ತಿದ್ದುಪಡಿಯು ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕನ್ನು ಪರಿಚಯಿಸಿದ ವಿಧಿ 21A ಅನ್ನು ಸೇರಿಸಿತು. ಹಾಗಾಗಿ, ಶಿಕ್ಷಣದ ಹಕ್ಕು(RTE) ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ಸೂಕ್ತ ವಿಸ್ತರಣೆಯಾಗಿದೆ. ಶಿಕ್ಷಣದ ಹಕ್ಕು ಜೀವಿಸುವ ಹಕ್ಕಿನ ಭಾಗವಾಗಿದೆ .

೨. ಈ ಮೂಲಭೂತ ಹಕ್ಕನ್ನು ಕಾರ್ಯಗತಗೊಳಿಸಲು ಜಾರಿಗೆ ತಂದ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ, 2009 (RTE) ಆರರಿಂದ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಮೂರರಿಂದ ಹದಿನೆಂಟು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡುವ ರಾಜ್ಯದ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ವಿಸ್ತರಿಸುತ್ತದೆ. ಆದ್ದರಿಂದ ಹಿಜಾಬ್ ಧಾರಣೆಯ ನಿರ್ಬಂಧವು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಓದುವ ಹೆಣ್ಣು ಮಕ್ಕಳ ಹಕ್ಕಿನ ಉಲ್ಲಂಘನೆಯಾಗಿದೆ. ಪ್ರತಿಯೊಂದು ಮಗುವೂ ಶಾಲಾ/ಕಾಲೇಜಿಗೆ ಹಾಜರಾಗುವ ಮೂಲಭೂತ ಹಕ್ಕನ್ನು ಹೊಂದಿದ್ದು, ಯಾವುದೇ ಕಾರಣಕ್ಕಾಗಿಯೂ ಮಕ್ಕಳ ಶಿಕ್ಷಣವನ್ನು ನಿರಾಕರಿಸುವುದು ಅಥವಾ ನಿರ್ಭಂಧಿಸುವುದು ಶಿಕ್ಷಣ ಹಕ್ಕಿನ ಉಲ್ಲಂಘನೆಯಾಗುತ್ತದೆ. ಈ ಹಕ್ಕನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ ಮತ್ತು ಯಾವುದೇ ಉಲ್ಲಂಘನೆಯನ್ನು ಶಿಕ್ಷಿಸುವುದು ನ್ಯಾಯಾಲಯದ ಜವಾಬ್ದಾರಿ. ಈ ಎರಡೂ ಸಂಸ್ಥೆಗಳು ಮಕ್ಕಳ ಬಗ್ಗೆ ತಮ್ಮ ಸಾಂವಿಧಾನಿಕ ಜವಾಬ್ದಾರಿಗಳನ್ನು ಪೂರೈಸುವುದು ಕಡ್ಡಾಯ.

೩. ಶಾಲಾ ಅಭಿವೃದ್ಧಿ ಮತ್ತು ಶಾಲಾ ಆಡಳಿತ ಕಾರ್ಯಭಾರವನ್ನು ನಿರ್ವಹಿಸಲು ಶಾಲಾ ನಿರ್ವಹಣಾ ಸಮಿತಿಗೆ (SMC-ನಮ್ಮ ರಾಜ್ಯದಲ್ಲಿ ಎಸ್‌ ಡಿ ಎಂಸಿ) ) ಅಧಿಕಾರ ಮತ್ತು ಜವಾಬ್ದಾರಿಯನ್ನು ನೀಡಬೇಕೆಂದು ಶಿಕ್ಷಣ ಹಕ್ಕು ಕಾಯಿದೆ ಅಪೇಕ್ಷಿಸುತ್ತದೆ. ಆದರೆ, ಯಾವುದೇ ಸಂದರ್ಭದಲ್ಲಿ, SMC ಗಳು ಅಥವಾ ಕಾಲೇಜುಗಳು ವಿದ್ಯಾರ್ಥಿಗಳು ಅಥವಾ ಶಿಕ್ಷಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಅಥವಾ ನಿರ್ದಿಷ್ಟವಾಗಿ ಒಂದು ಸಮುದಾಯದ ಸದಸ್ಯರ ವಿರುದ್ಧವಿರುವ ನಿರ್ಬಂಧಗಳನ್ನು ಹೇರುವಂತಿಲ್ಲ. ಅನೇಕ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಿಂದೂ ಧಾರ್ಮಿಕ ಚಿಹ್ನೆಗಳು ಮತ್ತು ಪ್ರಾರ್ಥನೆಗಳ ಬಹಿರಂಗ ಪ್ರದರ್ಶನಗಳನ್ನು ಹೊಂದಿರುವಾಗ, ಒಂದು ಸಮುದಾಯದ ಉಡುಗೆ/ಉಡುಪುಗಳನ್ನು ಆಯ್ದು ನಿರ್ಧಿಷ್ಟವಾಗಿ ನಿಷೇಧಿಸುವುದು ಮತ್ತು ಏಕರೂಪದ, ಬಹುಸಂಖ್ಯಾತ ಸಂಸ್ಕೃತಿಯನ್ನು ಜಾರಿಗೊಳಿಸುವುದು ಮತಾಂಧತೆಯಾಗಿದೆ. ಸಮವಸ್ತ್ರದ ಮೇಲೆ ಹಿಜಾಬ್ ಧರಿಸುವ ಮೂಲಕ ಮುಸ್ಲಿಂ ವಿದ್ಯಾರ್ಥಿಗಳು ಅವರ ನಂಬಿಕೆಗಳನ್ನು ಪಾಲಿಸಿದರೆ , ಸಮವಸ್ತ್ರದ ಜೊತೆಗೆ ಪೇಟ, ಬಿಂದಿ/ಕುಂಕುಮ/ತಿಲಕ ಮತ್ತು ಬಳೆಗಳನ್ನು ಧರಿಸುವ ಇತರೆ ಸಮುದಾಯದ ವಿದ್ಯಾರ್ಥಿಗಳು ತಮ್ಮ ನಂಬಿಕೆಗಳನ್ನು ಡ್ರೆಸ್ ಕೋಡ್ ಭಾಗವಾಗಿ ಪಾಲಿಸುತ್ತಿದ್ದಾರೆ.

೪. ಕಲಿಕೆಯ ವಾತಾವರಣವನ್ನು ಸಂರಕ್ಷಿಸಲು ಸಂಸ್ಥೆಗಳಲ್ಲಿ ‘ಏಕರೂಪತೆ’ ಅಗತ್ಯವಿದೆ ಎಂದು ಹೈಕೋರ್ಟ್ ತೀರ್ಪು ವಾದಿಸುತ್ತದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ೨೦೦೫ ರ ‘ಶಿಕ್ಷಣದ ಗುರಿಗಳು’ ಪೊಸಿಶನ್ ಪೇಪರ್ನಲ್ಲಿ ಸೂಚಿಸಿರುವಂತೆ, ನಮ್ಮ ವಿದ್ಯಾರ್ಥಿಗಳ ಚಿಂತನೆಯನ್ನು ವಿಸ್ತರಿಸಲು, ಇತರರ ಬಗ್ಗೆ ಗೌರವವನ್ನು ಬೆಳೆಸಲು ಮತ್ತು ಸಾಮರಸ್ಯದ ಸಮಾಜವನ್ನು ನಿರ್ಮಿಸಲು, ವೈವಿಧ್ಯತೆ ಮತ್ತು ತಮ್ಮದೇ ಅಲ್ಲದೆ, ಇತರ ಸಂಸ್ಕೃತಿಳಿಗೆ ಒಡ್ದಿಕೊಳ್ಳುವುದು ಅತ್ಯಗತ್ಯ. ಯುವಜನರು ಸಹಿಷ್ಣುತೆ, ಸಹಾನುಭೂತಿ, ಕಾಳಜಿ ಮತ್ತು ಇತರರ ಮನಸ್ಥಿತಿಯನ್ನು ತಿಳಿಯಲು ಮತ್ತು ಅವುಗಳಿಗೆ ಗೌರವ ನೀಡಲು ಶಾಲೆಯು ಸೂಕ್ತವಾದ ವಾತಾವರಣವನ್ನು ಒದಗಿಸಬೇಕು.ವ್ಯಕ್ತಿಗಳು, ವಿಶೇಷವಾಗಿ ನಮ್ಮ ಯುವಕರು, ತಮ್ಮ ಉಡುಗೆ ಮತ್ತು ಬಟ್ಟೆ ಸೇರಿದಂತೆ ವಿವಿಧ ರೀತಿಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಲು ಪ್ರೋತ್ಸಾಹಿಸಬೇಕು. ಅಂತಹ ಅನುಭವದಿಂದ ‘ಇತರ’ರ ಬಗ್ಗೆ ಮತ್ತು ‘ಇತರ’ರಿಂದ ಕಲಿಯಲು ಹಾಗು ಪರಸ್ಪರ ಗೌರವವನ್ನು ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ವಿದ್ಯಾರ್ಥಿಗಳನ್ನು ಟೀಕಿಸುವುದು, ಶಿಕ್ಷಿಸುವುದು ಮತ್ತು ಅವಮಾನಿಸುವುದು ಆಘಾತ ಮತ್ತು ದೀರ್ಘಕಾಲೀನ ಹಾನಿಯನ್ನು ಉಂಟುಮಾಡುತ್ತದೆ. ಅನ್ಯಾಯವನ್ನು ಹೇರಲು ಅಧಿಕಾರವನ್ನು ಬಳಸಬಹುದು ಮತ್ತು ಕನಿಕರ ತೋರಿಸುವುದು ದುರ್ಬಲ ಮತ್ತು ಅನವಶ್ಯಕ ಎಂದು ಅವರಿಗೆ ತಿಳಿಸುತ್ತದೆ.

೫. ಇಂದು, ಮಂದೆ ಸ್ವಭಾವ ಮತ್ತು ಗುಂಪು ಗಲಭೆ, ಕ್ರೂರತೆಯಿಂದ ಪಾರಾಗಲು ನಮಗೆ ಶಿಕ್ಷಣದ ಸಹಾಯ ಬೇಕಾಗಿದೆ. ಅದು ಸೃಜನಶೀಲತೆ, ಸಹಯೋಗ ಮತ್ತು ಅಭಿವ್ಯಕ್ತಿಗೆ ಅವಕಾಶ ಕಲ್ಪಿಸಲು ಸಹಾಯ ಮಾಡುವ ಅಗತ್ಯವಿದೆ. ಪ್ರಜಾಪ್ರಭುತ್ವಕ್ಕೆ ಭಿನ್ನಾಭಿಪ್ರಾಯ ಅತ್ಯಗತ್ಯ. ವಿಧೇಯತೆ ಮತ್ತು ರೆಜಿಮೆಂಟೇಶನ್ (ಪಡೆರಚನೆ) ವ್ಯವಸ್ಥೆಯಿಂದ ವೈಯಕ್ತಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಎರಡನ್ನೂ ಹಾನಿಗೊಳಿಸುವ ಕ್ರೌರ್ಯಗಳು ಏಕರೂಪವಾಗಿ ಉದ್ಭವಿಸುತ್ತವೆ. ಶಾಲೆ ಕಾಲೇಜುಗಳು ಯುವತಿಯರು ತಮ್ಮ ಉಡುಗೆ(ಅಲಂಕರಣ) ಮತ್ತು ಬಟ್ಟೆಗೆ ಸಂಬಂಧಿಸಿದಂತೆ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೆಂಬಲಿಸಬೇಕು. ಪಿತೃತ್ವವು ಹಾನಿಕಾರಕ ಮತ್ತು ಮಹಿಳೆಯರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ.

೬. ಅವಕಾಶವಂಚಿತ ಸಮುದಾಯದ ಈ ಮಕ್ಕಳ ಶಿಕ್ಷಣದ ಹಕ್ಕಿನ ಉಲ್ಲಂಘನೆಯು, ಸಾಂಕ್ರಾಮಿಕ ರೋಗದಿಂದಾಗಿ ಸುಮಾರು 2 ವರ್ಷಗಳಿಂದ ಮುಚ್ಚಿದ ಶಾಲೆಗಳು ಮತ್ತು ಕಾಲೇಜುಗಳು ಈಗಷ್ಟೆ ಪುನಃ ತೆರೆಯುತ್ತಿರುವ ಸಂದರ್ಭದಲ್ಲಿ ಉಂಟಾಗಿದೆ. ಶಾಲೆ ಮುಚ್ಚುವಿಕೆಯಿಂದ ವಿದ್ಯಾರ್ಥಿಗಳಿಗೆ ಆಗಿರುವ ನಷ್ಟವು ಸ್ವತಂತ್ರ ಭಾರತದ ಇತಿಹಾಸದಲ್ಲಿ ಹಿಂದೆಂದೂ ಕಂಡಿಲ್ಲದಂತಹ ಶಿಕ್ಷಣ ತುರ್ತು ಪರಿಸ್ಥಿತಿ. ಅಪೌಷ್ಟಿಕತೆ, ಬಾಲ ಕಾರ್ಮಿಕತೆ, ಬಾಲ್ಯ ವಿವಾಹಗಳು ಮತ್ತು ಕೌಟುಂಬಿಕ ದೌರ್ಜನ್ಯಗಳು ತೀವ್ರವಾಗಿ ಹೆಚ್ಚಿವೆ. ಬಹುತೇಕ ಮಕ್ಕಳು ಕಲಿಕೆಯಲ್ಲಿ ಮತ್ತು ಸಾಮಾಜಿಕ-ಭಾವನಾತ್ಮಕ ಅಭಾವವನ್ನು ಅನುಭವಿಸಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿ ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣ ಈಗಾಗಲೇ ತೀವ್ರವಾಗಿ ಹಾನಿಗೊಳಗಾಗಿರುವಾಗ, ಅವರು ಶಾಲಾ/ಕಾಲೇಜಿಗೆ ಹಾಜರಾಗುವುದನ್ನು ಅಡ್ಡಿಮಾಡುವ ಸಮಸ್ಯೆಗಳನ್ನು ಎತ್ತುವ ಮೂಲಕ ಇದನ್ನು ಉಲ್ಬಣಗೊಳಿಸುವುದನ್ನು ಯಾವರೀತಿಯಿಂದಲೂ ಒಪ್ಪಲಾಗದು ಹಾಗು ಸಮರ್ಥಿಸಲಾಗದು

೭. ಈ ಎಲ್ಲ ಕಾರಣದಿಂದ ನಾವು ಈ ಕೆಳಗಿನ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರವನ್ನು ಬಲವಾಗಿ ಒತ್ತಾಯಿಸುತ್ತೇವೆ:

ಅ. ವಿದ್ಯಾರ್ಥಿಗಳ ವೈಯಕ್ತಿಕ ಆಯ್ಕೆಗಳಾದ ಬಟ್ಟೆ ಮತ್ತು ಡ್ರೆಸ್ಸಿಂಗ್(ಅಲಂಕರಣ) ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿ

ಆ. ಶಾಲೆಗಳು ಮತ್ತು ಕಾಲೇಜುಗಳಿಗೆ ತಕ್ಷಣ ಹಾಜರಾಗಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸದಿದ್ದರೆ – ಈಗಿನ ಶಿಕ್ಷಣ ತುರ್ತು ಪರಿಸ್ಥಿತಿಯ ಬಿಕ್ಕಟ್ಟಿನಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಹಾಗು ಹೊರಗುಳಿಯುವಂತೆ ಮಾಡುತ್ತದೆ. ಇದನ್ನು ತಡೆಯಲು ವ್ಯಾಪಕ ಜನ ಚಳುವಳಿಯ ಅಗತ್ಯವಿದೆ

ಇ. ಸರಕಾರ ತನ್ನ ಎಲ್ಲ ಶಕ್ತಿಸಾಮರ್ಥ್ಯಗಳನ್ನು ಹಾಗು ಸಂಪನ್ಮೂಲಗಳನ್ನು ಕೋವಿಡ್ ನಿಂದ ಉಂಟಾಗಿರುವ ಶಿಕ್ಷಣದ ಬಿಕ್ಕಟ್ಟು ಪರಿಹರಿಸುವಲ್ಲಿ ಕೇಂದ್ರೀಕರಿಸಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕಾದ ತುರ್ತು ಅಗತ್ಯವಿದೆ

ಹೇಳಿಕೆಯನ್ನು ಇಂಗ್ಲಿಶ್, ಕನ್ನಡದಲ್ಲಿ ಓದಿ

Leave a Reply

Your email address will not be published.